ಎಟ್ಟುತ್ತೊಕೈ-
	ಪ್ರಾಚೀನ ತಮಿಳು ಸಾಹಿತ್ಯದ ಎಂಟು ಸಂಕಲನಗ್ರಂಥಗಳ ಸಾಮೂಹಿಕ ಹೆಸರು. ಹಲವಾರು ಕವಿಗಳ ಕೃತಿಗಳನ್ನು ಒರೆಹಚ್ಚಿ ಉತ್ತಮವಾದ ಕವನಗಳ ಸಂಗ್ರಹಗಳನ್ನು ಸಿದ್ಧಪಡಿಸುವ ರೂಢಿ ತಮಿಳುಸಾಹಿತ್ಯದ ಒಂದು ವೈಶಿಷ್ಟ್ಯ. ಇಂಥ ಎಂಟು ಕವಿತಾ ಸಂಗ್ರಹಗಳು ದೊರೆತಿವೆ. ಒಟ್ಟಾಗಿ ಅವುಗಳಿಗೆ ಎಟ್ಟು (ಎಂಟು) ತ್ತೊಕೈ (ಸಂಗ್ರಹ) ಎಂದು ಹೆಸರು: 1 ನಟ್ರಿಣೈ 2 ಕುರುಂತೊಕೈ 3 ಐಂಕುರುನೂರು 4 ಪದಿಟ್ರುಪ್ಟತ್ತು 5 ಪರಿಪಾಡಲ್ 6 ಕಲಿತ್ತೊಕೈ 7 ಅಹನಾನೂರು 8 ಪುರನಾನೂರು.

	ಆಗಿನ ಕಾಲದ ಚರಿತ್ರೆ, ಸಾಮಾಜಿಕಸ್ಥಿತಿಗತಿ, ಯುದ್ಧಪ್ರಣಾಲಿ, ಉದ್ಯೋಗ, ವ್ಯಾಪಾರ, ಆರ್ಥಿಕ ಪ್ರಗತಿ, ಜನಜೀವನ, ಪ್ರಣಯ, ದಾಂಪತ್ಯ-ಇವುಗಳ ರೀತಿ ನೀತಿ ಮುಂತಾದವುಗಳನ್ನು ತಿಳಿಯಲು ಈ ಸಂಕಲನಗಳು ಸಹಾಯಕವಾಗಿವೆ, ಪದಿಟ್ರುಪ್ಪತ್ತು ಮತ್ತು ಪುರನಾನೂರು ಇವೆರಡೂ ಪುರಂ ವರ್ಗಕ್ಕೆ ಸೇರಿದ ಸಾಹಿತ್ಯ; ಅಂದರೆ ರಾಜ್ಯಾಡಳಿತ, ಯುದ್ಧ, ಧನಕನಕಾದಿ ಪಾಪಪುಣ್ಯಕಾರ್ಯ, ದಾನಧರ್ಮ ಮುಂತಾದ ವಿಷಯಗಳನ್ನು ಕುರಿತದ್ದು. ಉಳಿದ ಗ್ರಂಥಗಳು ಅಹಂ ವರ್ಗಕ್ಕೆ ಸೇರಿದ ಸಾಹಿತ್ಯ; ಅಂದರೆ ಹೃದಯದ ಭಾವಗಳು, ಸ್ತ್ರೀ-ಪುರುಷರ ಪ್ರೇಮ, ಅವರ ಪರಸ್ಪರ ಪ್ರೀತಿ, ಮಾತುಕತೆ, ಲಲ್ಲೆ, ವಿಯೋಗ, ವಿವಾಹ, ದಾಂಪತ್ಯಜೀವನ ಮುಂತಾದವನ್ನು ವರ್ಣಿಸುವುದು.

	ನಟ್ರಿಣೈ: ಇದರಲ್ಲಿ 192 ಕವಿಗಳ ಕವನಗಳು ಸೇರಿವೆ. ಅಹವಲ್ ಛಂದಸ್ಸಿನಲ್ಲಿ 8 ಪಂಕ್ತಿಗಳಿಂದ 12 ಪಂಕ್ತಿಗಳವರೆಗಿನ ಉದ್ದವುಳ್ಳ 400 ಭಾವಗೀತೆಗಳ ವಿಶೇಷ ಗುಣ. ಪ್ರಾಚೀನ ತಮಿಳರ ಜೀವನದ ನಸುನೋಟ ಈ ಕವನಗಳಿಂದ ದೊರೆಯುವುದು. ಪಾಂಡ್ಯರಾಜನಾದ ಮಾರನ್‍ವಳುದಿ ಎಂಬವನ ಆದೇಶದಿಂದ ಈ ಗ್ರಂಥದ ಸಂಕಲನೆಯಾಯಿತು.

	ಕುರುಂತೊಕೈ: ಇದು ಕಿರುಗವನಗಳ ಸಂಗ್ರಹ. 204 ಕವಿಗಳ ರಚನೆಯಿಂದ ಆಯ್ದು ತೆಗೆದ 402 ಭಾವಗೀತೆಗಳು ಇದರಲ್ಲಿ ಸೇರಿವೆ. ಎಲ್ಲ ಹಾಡುಗಳೂ ಅಹವಲ್ ಛಂದಸ್ಸಿನಲ್ಲಿವೆ. ಉದ್ದ 4 ರಿಂದ 8 ಪಂಕ್ತಿಗಳಷ್ಟು, ಪ್ರೇಮದ ಮತ್ತು ನಲ್ಲ-ನಲ್ಲೆಯರ ಒಲುಮೆಗಳ ಮನಮೋಹಕವಾದ ವರ್ಣನೆಗಳು ಇದರಲ್ಲಿ ದೊರೆಯುತ್ತವೆ. ಪಾರಿಕ್ಕೋ ಎಂಬ ಕವಿ ಈ ಸಂಗ್ರಹವನ್ನು ಸಿದ್ಧಗೊಳಿಸಿದ.

	ಐಂಕುರುನೂರು: ಇದರಲ್ಲಿ 500 ಕಿರಿಯ ಭಾವಗೀತೆಗಳು ಅಂದರೆ 3 ರಿಂದ 6 ಪಂಕ್ತಿಗಳ ಉದ್ದದ ಚುಟುಕ ಗೀತೆಗಳು ಸೇರಿವೆ, ಕೂಡಲೂರ್ ಕಿಳಾರ್ ಎಂಬ ಕವಿ ಇದರ ಸಂಗ್ರಹಕಾರ.

	ಕುರುಂಚಿ (ಮಲೆನಾಡು), ಮರುದಂ (ಬಯಲು, ಮೈದಾನ ಅಥವಾ ಬೆಳವಲು ಸೀಮೆ), ನೆಯ್ದಲ್ (ಕರಾವಳಿ) ಮುಲ್ಲೈ (ಕಾಡು), ಮತ್ತು ಪಾಲೈ (ಮರಳುಗಾಡು)-ಪ್ರಾಚೀನ ತಮಿಳುನಾಡಿನ ಈ ಬಗೆಯ ಭೌಗೋಳಿಕ ವಿಭಾಗಗಳನ್ನು (ತಿಣೈ) ಪ್ರೇಮದ ಪ್ರತಿಸ್ಥಿತಿಗೂ ಹೊಂದಿಕೆಯಾಗುವಂತೆ ಇಲ್ಲಿ ಮಾಡಲಾಗಿದೆ. ಹೇಗೆಂದರೆ, ನಲ್ಲ-ನಲ್ಲೆಯರ ಮತ್ತು ಸಂಗಮವೇ ಕುರುಂಚಿ. ಇನಿಯಳ ಮುನಿಸು-ಮರುದಂ, ತನ್ನ ಪ್ರಿಯನ ಅಗಲಿಕೆಯಿಂದ ಕೊರಗುವುದು-ನೆಯ್ದಲ್. ಯುದ್ಧ ಅಥವಾ ಬೇರೆ ಕೆಲಸದ ಮೇಲೆ ಪರಸ್ಥಳಕ್ಕೆ ತೆರಳಿದ ತನ್ನ ಗಂಡನ ಬರವಿಗಾಗಿ ಕಾದಿರುವಿಕೆ-ಮುಲ್ಲೈ. ಪ್ರೇಮಿಗಳ ಅಗಲಿಕೆ ಅಥವಾ ವಿಯೋಗ-ಪಾಲೈ. (ಸಾಮಾನ್ಯವಾಗಿ ಅಗಲಿಕೆಯನ್ನು ಎಲ್ಲ ತಿಣೈಗಳಿಗೂ ಹೊಂದಿಸುವುದುಂಟು). ಒಬ್ಬೊಬ್ಬ ಕವಿ ಒಂದೊಂದು ತಿಣೈಗೆ ಸಂಬಂಧಿಸಿದ 100 ಗೀತೆಗಳನ್ನು ರಚಿಸಿದ್ದಾನೆ. ಚುಟುಕದ ಗೀತೆಗಳಾಗಿದ್ದರೂ ಇವುಗಳ ಶೈಲಿ, ಅಲಂಕಾರ ಮತ್ತು ಭಾವಗಳು ಅಸದೃಶವಾಗಿವೆ.

	ಪದಿಟ್ರುಪ್ಪತ್ತು : ಇದರಲ್ಲಿ ಪುರಂ ವರ್ಗಕ್ಕೆ ಸೇರಿದ ಹತ್ತು ಹಾಡುಗಳಿವೆ. ಹತ್ತು ಕವಿಗಳು ಒಬ್ಬೊಬ್ಬರೂ ಬೇರೆ ಬೇರೆ ಚೇರರಸರನ್ನು ಕುರಿತು ಹಾಡಿದ ಹತ್ತು ಹಾಡುಗಳು ಈ ಸಂಗ್ರಹದಲ್ಲಿವೆ. ಇವುಗಳ ಪೈಕಿ ಮೊದಲ ಹತ್ತು ಹಾಡುಗಳು ಅಪ್ರಾಪ್ಯ. ತಮಿಳು ಸಂಘ ಕಾಲದಲ್ಲಿನ ಚೇರನಾಡು ಮತ್ತು ಚೇರರಾಜರುಗಳ ವಿಷಯವಾಗಿ ಅನೇಕ ಅಮೂಲ್ಯ ಐತಿಹಾಸಿಕ ಸಾಮಗ್ರಿಗಳು ಈ ಸಂಕಲನದಿಂದ ದೊರೆಯುತ್ತವೆ.

	ಪರಿಪಾಡಲ್ : ಈ ಸಂಗ್ರಹದಲ್ಲಿ ಪರಿಪಾಡಲ್ ಎಂಬ ಛಂದಸ್ಸಿನಲ್ಲಿ ರಚಿತವಾದ 70 ಹಾಡುಗಳಿವೆ. ಆದರೆ ಇವುಗಳಲ್ಲಿ 22 ಮಾತ್ರ ಪೂರ್ತಿ ದೊರೆತಿವೆ. ವಿಷ್ಣುವಿನ ಸ್ತುತಿಯಾಗಿ 6, ಮುರುಗನ ಸ್ತುತಿಯಾಗಿ 8, ವೈಗೈ ನದಿಯನ್ನು ಕುರಿತಂತೆ 8 ಹಾಡುಗಳು ಇವೆ. ಸ್ವರ ಪ್ರಸ್ತಾರಹಾಕಿ ಇವನ್ನು ಸಂಗೀತಕ್ಕೆ ಅನುಗೊಳಿಸಲಾಗಿದೆ.

	ಕಲಿತ್ತೊಕೈ : ಬೇರೆ ಬೇರೆ ಐದು ಕವಿಗಳ ರಚನೆಗಳಿಂದ ಆಯ್ದು ತೆಗೆದ 150 ಹಾಡುಗಳು ಈ ಸಂಗ್ರಹದಲ್ಲಿವೆ. ಎಲ್ಲ ಹಾಡುಗಳೂ ಕಲಿ ಛಂದಸ್ಸಿನಲ್ಲಿವೆ; ಅದರಿಂದಲೇ ಈ ಸಂಗ್ರಹಕ್ಕೆ ಈ ಹೆಸರು ಬಂದಿದ್ದು. ಕುರುಂಚಿ ತಿಣೈ, ಮರುದಂ, ನೆಯ್ದಲ್, ಮುಲ್ಲೈತಿಣೈ ಮತ್ತು ಪಾಲೈ ರಚನೆಗಳಿಂದ ಆಯ್ದವು ಈ ಸಂಕಲನದಲ್ಲಿರುವ ಹಾಡುಗಳು. ಇದರಲ್ಲಿ ಬರುವ ಪ್ರೇಮಗೀತೆಗಳು ಕಿವಿಗೆ ಇಂಪಾಗಿರುವುದಲ್ಲದೆ, ಪ್ರಾಕೃತಿಕ ದೃಶ್ಯಗಳ ವರ್ಣನೆ ಬಲು ಸುಂದರವಾಗಿಯೂ ಸಾರಗರ್ಭಿತವಾಗಿಯೂ ಅರ್ಥಪುಷ್ಟಿಯುಳ್ಳದ್ದಾಗಿಯೂ ಸಮೀಚೀನ ಉಪಮೆ, ರೂಪಕಗಳಿಂದ ಕೂಡಿದ್ದಾಗಿಯೂ ಇದ್ದು ಕಾವ್ಯರಸವನ್ನು ಸೂಸುತ್ತಿವೆ.
	ಅಹನಾನೂರು : ಪ್ರಣಯ ಸಂಬಂಧವಾದ 400 ಹಾಡುಗಳು ಈ ಸಂಗ್ರಹದಲ್ಲಿವೆ. ಇದರಲ್ಲಿನ ಗೀತೆಗಳು 13 ರಿಂದ 31 ಪಂಕ್ತಿಗಳಷ್ಟು ಉದ್ದವಾಗಿವೆ. ಇವನ್ನು 154 ಕವಿಗಳ ರಚನೆಗಳಿಂದ ಸಂಕಲನ ಮಾಡಲಾಗಿದೆ. ಈ ಗ್ರಂಥದಲ್ಲಿನ 400 ಹಾಡುಗಳನ್ನೂ ಮೂರು ಖಂಡಗಳಾಗಿ ವಿಂಗಡಿಸಿರುವರು. ಮೊದಲ 120 ಹಾಡುಗಳ ಪರಿಚ್ಛೇದಕ್ಕೆ ಕಳಿಟ್ರಿಯಾನೈ ನಿರೈ ಎಂದು (ಗಂಡಾನೆಗಳ ಓರಣ) ಹೆಸರು. 121 ರಿಂದ 300 ರವರೆಗಿನ ಹಾಡುಗಳ ಪರಿಚ್ಛೇದಕ್ಕೆ ಮಣಿಮಿಡೈಪವಳಂ ಎಂದು (ಮಣಿಗಳನ್ನೆಡೆಯಿರಿಸಿದ ಹವಳದ ಸರ) ಹೆಸರು. ಕೊನೆಯ ನೂರು ಹಾಡುಗಳ ಪರಿಚ್ಛೇದಕ್ಕೆ ನಿತ್ತಿಲಕ್ಕೋವೈ (ಮುತ್ತಿನ ಹಾರ) ಎಂದು ಹೆಸರು.

	ಉಕ್ಕಿರಪ್ಪೆರುವಳುದಿ ಎಂಬ ಅರಸನ ಸಲಹೆಯ ಮೇರೆಗೆ ರುದ್ರಶರ್ಮನೆಂಬ ಕವಿ ಈ ಸಂಗ್ರಹವನ್ನು ಅನುಗೊಳಿಸಿದ. ಈ ಹಾಡುಗಳಲ್ಲಿ ಅಚ್ಚುಮೆಚ್ಚಿನ ಪ್ರಕೃತಿ ವರ್ಣನೆ, ರುಚಿಕಟ್ಟಾದ ಉಪಮೆಗಳು, ಭಾವಪೂರಿತ ವಿಚಾರಗಳು, ಮಾತಿನ ನಯ- ಎಲ್ಲವೂ ತುಂಬಿವೆ. ಇತಿಹಾಸ ಸಂಬಂಧವಾದ ಪ್ರಾಸ್ತಾವಿಕ ಸೂಚನೆಗಳೂ ಅಲ್ಲಲ್ಲಿ ದೊರೆಯುತ್ತವೆ. ಉದಾಹರಣೆಗೆ, ಒಂದು ಹಾಡಿನ ಭಾಷಾಂತರ ಹೀಗಿದೆ: "ಧರ್ಮದ ಹಾದಿ ತಪ್ಪದ ಬಾಳು, ಎಂದೂ ಪರರ ಬಳಿ ಸಾರದ ಭಾಗ್ಯ ಇವೆರಡೂ ಧನದಿಂದೊದಗುವುದು, ರನ್ನೆ"-ಅನ್ನುತ ಎಮ್ಮ ಕರಿಯ ಐಗಾಲಹೆರಳನ್ನು ಸವರಿದವರ ಅಗಲಿಕೆಯಿಂದ ನಾವು ತಾಪಪಟ್ಟರೂ ತಮ್ಮ ಕರ್ತವ್ಯವನ್ನವರು ಪಾಲಿಸಲಿ ! ಗೆಳತಿ ! ಇದನ್ನು ಪಾಲೈಪಾಡಿಯ ಪೆರುಂಕಡುಂಗೋ ಎಂಬ ಕವಿ ಹಾಡಿದ್ದಾನೆ.

	ಪುರನಾನೂರು : ಅಹವಲ್ ಛಂದಸ್ಸಿನಲ್ಲಿ ಬೇರೆ ಬೇರೆ 150 ಕವಿಗಳು ಬರೆದ 400 ಕವನಗಳು ಈ ಸಂಗ್ರಹದಲ್ಲಿವೆ. ತಮಿಳುನಾಡಿನ ಪ್ರಾಚೀನ ಅರಸರು, ಮಂತ್ರಿಗಳು, ದಂಡನಾಯಕರು, ಪಾಳೆಯಗಾರರು, ವೀರಕಲಿಗಳು-ಇವರನ್ನು ಕುರಿತ ಅನೇಕ ವಿಷಯಗಳನ್ನು ಈ ಕವನಗಳಲ್ಲಿ ಪ್ರಸ್ತಾಪಿಸಲಾಗಿದೆ. ಆಗಿನ ನಾಗರಿಕತೆ, ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿ, ಆಳ್ವಿಕೆ, ಕವಿಗಳ ಗೌರವಾನ್ವಿತಸ್ಥಾನ ಇವನ್ನು ತೋರಿಸುವ ಕೈಗನ್ನಡಿಯಂತಿವೆ, ಈ ಹಾಡುಗಳು. ಕಣಿಯನ್ ಪೂಂಗುನ್ರನಾರ್ ಎಂಬ ಕವಿಯ ಕೃತಿಯೊಂದರ ಭಾಷಾಂತರ ಹೀಗಿದೆ : ಯಾವದೂ ಊರೇ ಯಾವರೂ ಕೆಳೆಯರೇ; ಕೇಡುಂನಲ್ಮೆಯುಂ ಪರರೀಯೇ ಬಾರ; ನೋವು- ತಣ್ಪು ಎಂಬವು ಅಂತೇ ತೆರದವು; ಸಾಯುವುದೂ ಹೊಸತಲ್ಲ; ಬಾಳುವುದು ಸವಿಯೆನೆ ನಲಿಯುತುಮಿಲ್ಲ; ಮುನಿಸಿನಿಂ ಕರಕಷ್ಟವೆಂದೂ ಅನ್ನೆವು; ಮಿಂಚಿನೊಂದಿಗೆ ಬಾಂದಳದಿಂ ತಣ್ಬನಿಗರೆದು ಸಂತತಂ ಬಂಡೆಯನ್ನಪ್ಪಳಿಸಿ ಭೋರ್ಗರೆವ ನೆರೆಹೆಬ್ಬೊಳೆಯ ನೀರ್ಬಟ್ಟಿಯೊಳ್ ಪೋಪ ತೆಪ್ಪವಂ ಪೋಲ್ಗುಂ ಹರಣಂ ವಿಧಿದೂಡೆ ಹರಿವುದೆನೆ ಸುe್ಞÁನಿಗಳ ಉಪದೇಶಗಳಿಂ ಮನಗಂಡೆಮಾದೊಡೆ ಗಣ್ಯರಾದ ಹಿರಿಯರನ್ನು ಮೆಚ್ಚುವುದೂ ಇಲ್ಲ ಕಿರಿಯವರನ್ನು ತೆಗಳುವುದು ಸುತರಾಂ ಇಲ್ಲ.

	ಸಂಗ್ರಹದ ಈ ಎಂಟು ಗ್ರಂಥಗಳಿಗೂ ಕವನಗಳನ್ನು ನೀಡಿರುವ ಕವಿಗಳ ಸಂಖ್ಯೆ ಸುಮಾರು 740. ಇವರಲ್ಲಿ ಹಲವಾರು ಅರಸು ಮನೆತನಕ್ಕೆ ಸೇರಿದವರು, ಕೆಲವರು ಮಹಿಳೆಯರು. ಇದರಿಂದ ಆಗಿನ ಕಾಲದಲ್ಲಿ ಸಾಹಿತ್ಯದ ಬಗ್ಗೆ ಅಭಿರುಚಿ ಹೇಗಿತ್ತು. ಕವಿಗಳ ಸ್ಥಾನಮಾನ ಏನಿತ್ತು ಎಂಬುದು ಚೆನ್ನಾಗಿ ಗೊತ್ತಾಗುತ್ತದೆ. ತಮಿಳು ಸಾಹಿತ್ಯದ ಪ್ರಾಚೀನತೆ ಮತ್ತು ಸಮೃದ್ಧಿ ನಿಜವಾಗಿಯೂ ಬೆರಗುಗೊಳಿಸುವಂಥದು. 									
	(ಎಂ.ವಿ.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ